ಬೇರ್ಡ್, ಜಾನ್ ಲೋಗಿ
1888-1946.  ಚಲಿಸುವ ವಸ್ತುಗಳ ದೂರದರ್ಶನವನ್ನು ಮೊತ್ತಮೊದಲಿಗೆ ಸಾಧಿಸಿದ ಸ್ಕಾಟ್‍ಲೆಂಡಿನ ತಾಂತ್ರಿಕ ತಜ್ಞ.  ಲಾರ್ಜ್‍ಫೀಲ್ಡ್ ಅಕಾಡೆಮಿ, ರಾಯಲ್ ಟೆಕ್ನಿಕಲ್ ಕಾಲೇಜ್ ಮತ್ತು ಗ್ಲಾಸ್ಗೊ ವಿಶ್ವವಿದ್ಯಾಯಲಗಳಲ್ಲಿ ಶಿಕ್ಷಣ ಪಡೆದು ಮುಂದೆ ಕ್ಲೈಡ್ ವ್ಯಾಲಿ ಎಲೆಕ್ಟ್ರಿಕ್ ಪವರ್ ಕಂಪೆನಿಯಲ್ಲಿ ಎಂಜಿನಿಯರನಾಗಿ ಸೇರಿದ.  ಅನಾರೋಗ್ಯದ ಕಾರಣ ಕೆಲಸ ಬಿಟ್ಟು 1922ರ ವೇಳೆಗೆ ವ್ಯಾಪಾರದಲ್ಲಿ ತೊಡಗಿದ.  ಅದರೊಂದಿಗೆ ದೂರದರ್ಶನದ ಬಗ್ಗೆ ಸಂಶೋಧನೆಯನ್ನೂ ಕೈಗೊಂಡ.
ಚಿತ್ರ ಅಥವಾ ವಸ್ತುವನ್ನು ಕ್ರಮವೀಕ್ಷಿಸಲು (ಸ್ಕ್ಯಾನ್) ಜರ್ಮನಿಯ ಪಾಲ ನಿಷ್ಕೋವ್ ವಿಶಿಷ್ಟ ವ್ಯವಸ್ಥೆಯೊಂದನ್ನು ರೂಪಿಸಿದ್ದ.  (1884).  ಅದರಲ್ಲಿ ಪ್ರೇಷಕ ಮತ್ತು ಗ್ರಾಹಕಗಳಿರುವ ಒಂದೊಂದು ಕೊನೆಯಲ್ಲೂ ರಂಧ್ರಗಳಿರುವ ಒಂದೊಂದು ಆವರ್ತನಶೀಲ ತಟ್ಟೆಯಿತ್ತು.  ಇತ್ತ ಅಮೆರಿಕದ ಡಿ.ಎಮ್. ಮೂರ್ ಎಂಬಾತ ಮೂರು ನಿಯಾನ್ ತುಂಬಿದ ಅನಿಲ ವಿಸರ್ಜನಾ ದೀಪವನ್ನು ತಯಾರಿಸಿದ್ದ (1917).  ನಿಯಾನ್ ದೀಪಕ್ಕೆ ಊಡಲಾಗುವ ವಿದ್ಯುತ್ತಿಗೆ ಅನುಗುಣವಾಗಿ ಅದರ ಪ್ರಕಾಶ ತೀವ್ರತೆ ಬದಲಾಗುತ್ತಿತ್ತು.  ನಿಷ್ಕೋವನ ಯಾಂತ್ರಿಕ ಕ್ರಮವೀಕ್ಷಣಾ ವ್ಯವಸ್ಥೆಯನ್ನೂ ಮೂರನ ನಿಯಾನ್ ದೀಪವನ್ನೂ ಬಳಸಿಕೊಂಡು ಬೇರ್ಡ್ 1923ರಲ್ಲಿ ತನ್ನ ಪ್ರಯೋಗ ಪ್ರಾರಂಭಿಸಿದ.

ಮೊದಲಿಗೆ ಇವನು ವಸ್ತುಗಳ ರೂಪರೇಖೆಯನ್ನು (ಔಟ್‍ಲೈನ್) ದೂರದರ್ಶಿಸಿದ (1924).  ಲಂಡನ್ನಿನ ರಾಯಲ್ ಇನ್‍ಸ್ಟಿಟ್ಯೂಶನ್ನಿನಲ್ಲಿ ದೂರದರ್ಶಿಸಿದ ಮನುಷ್ಯ ಮುಖಗಳ ಬಿಂಬಗಳು ಗುರುತು ಸಿಗುವಷ್ಟು ಚೆನ್ನಾಗಿದ್ದುವು (1925). ಚಲಿಸುವ ಛಾಯಾಚಿತ್ರಗಳ ಬಿಂಬಗಳನ್ನು ವಿದ್ಯುದೀಯವಾಗಿ ಪ್ರೇಷಿಸಿ ವಾಸ್ತವ ದೂರದರ್ಶನವನ್ನು ಮೊತ್ತಮೊದಲ ಬಾರಿಗೆ 1926ರಲ್ಲಿ ಪ್ರದರ್ಶಿಸಿದ.  ಆಗ 30 ರೇಖೆಗಳಿಂದ ರೂಪಿತವಾಗಿ ಸೆಕೆಂಡಿಗೆ 10 ಬಾರಿ ಪುನರಾವರ್ತಿಸುತ್ತಿದ್ದ ದೂರದರ್ಶನ ಬಿಂಬಗಳು ಚೆನ್ನಾಗಿರಲಿಲ್ಲ.  ಆದರೆ ದೂರ ದರ್ಶನವೆಂಬುದು ಮನುಷ್ಯನ ಕೈಗೆ ಎಟುಕಬಹುದಾದ ತಂತ್ರ ವಿದ್ಯೆಯಾಗಿ ಬೆಳೆಯಲು ಬೇರ್ಡನ ಪ್ರಯೋಗಗಳು ಚಾಲನೆ ನೀಡಿದವು.  ಮುಂದೆ ಜರ್ಮನ್ ಅಂಚೆ ಕಚೇರಿಯಲ್ಲಿ ದೂರದರ್ಶನ ಪ್ರಸಾರಕ್ಕೆ ಸೌಲಭ್ಯಗಳು ಒದಗಿದುವು.  ವಿದ್ಯುತ್ ಕ್ರಮವೀಕ್ಷಣಾ ವ್ಯವಸ್ಥೆ ರೂಢಿಗೆ ಬರುವ ಮೊದಲು ಬಿ ಬಿ ಸಿ 240 ಗೆರೆಗಳಿರುವ ಬೇರ್ಡನ ಯಾಂತ್ರಿಕ ಕ್ರಮವೀಕ್ಷಣ ವ್ಯವಸ್ಥೆಯನ್ನು ಉಪಯೋಗಿಸಿತು.  ಅಟ್ಲಾಂಟಿಕ್ ಸಾಗರದಾಚೆಗೆ ದೂರದರ್ಶನ (ಟ್ರಾನ್ಸ್ ಅಟ್ಲಾಂಟಿಕ್ ಟೆಲಿವಿಷನ್) ಪ್ರದರ್ಶನ ಅತಿರಕ್ತ ವಿಕಿರಣದಿಂದ (ಇನ್‍ಫ್ರಾರೆಡ್ ರೇಡಿಯೋಷನ್) ಕತ್ತಲಲ್ಲಿರುವ ವಸ್ತುಗಳು ಕಾಣುವಂತೆ ಮಾಡುವ ನೋಕ್ಟೊ ವಿಸರ್ ಎಂಬ ಸಾಧನ ತಯಾರಿ, ಸಹಜ ವರ್ಣದ ದೂರದರ್ಶನ ತಂತ್ರ-ಇವು ಬೇರ್ಡನ ಇತರ ಸಾಧನೆಗಳು.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ